Saturday, November 20, 2010

ಸಾರ್ಥಕತೆ..!!

ಕಸರತ್ತು ಮಾಡಿ ಬೆಳೆಸಿದ ದಪ್ಪ ತೋಳಿನ ಸಾರ್ಥಕತೆ ಗೊತ್ತಾದದ್ದು,
ಕೊಂಚ ಹೊತ್ತು ನನ್ನವ್ವ ನನ್ನ ತೋಳಿಗೊರಗಿ ನಿದ್ರಿಸಿದಾಗ..!
ಬದುಕ ಸಾರ್ಥಕತೆ ಕೂಡ...!

Thursday, October 7, 2010

ಬಿಳಿ ಹುಡುಗಿ ಮತ್ತು ಭೂಮಿ ಅಳಿಯ..!!

ಬೆಳ್ಳಾನೆ ಹೆಣ್ಣಿವಳು, ಚೆಂದಾದ ಕಣ್ಣವಳು
ಕಣ್ಣಲ್ಲೇ ಬೆಳಕೈತಿ, ಬೆಳದಿಂಗಳು ಐತಿ
ಏನೆಂದು ಬಣ್ಣಿಸಲಿ ನೇಸರವೆ ನಾಚೈತಿ
ಭೂಮಿಯ ಮಗಳಿವಳು ಮಲ್ಲಿಗೆವ್ವ ..!
ಬೆಳ್ಳಾನೆ ಹೆಣ್ಣಿವಳು, ಚೆಂದಾದ ಕಣ್ಣವಳು..!!!

ಚಂದಿರನ ಮನದಾಗೆ ಮಲ್ಲಿಗೆವ್ವ ಕುಂತಾಳ,
ಚಂದಿರನ ಮಡದಿ ಕಾಂತವ್ವೆ ಮುನಿದಾಳ,
ಸೂರ್ಯನಾ ಮನೆಯಾಗೆ ಪಂಚಾಯಿತಿ ಸೇರ್
ಸ್ಯಾಳ...!
ಅತ್ತಿಗೆಯ ಪರವಾಗಿ ಸೂರ್ಯಾನು ನಿಂತಾನ,
ಚಂದಿರನ ಒಲೈಸೆ ಪಿತೂರಿ ನಡೆಸ್ಯಾನ,
ಸೂರ್ಯಂಗು ಮಲ್ಲಿಗೆ ಮ್ಯಾಗ್ ಮನಸಾಗೈತಿ..!

ಸೂರ್ಯ ಚಂದಿರೀರ್ವರು ಧರೆಗಿಳಿದು ಬಂದಾರ,
ಭುವಿಯಕ್ಕನ ಮಡಿಲಿಗೆ ಬಾಗಿನವ ತಂದಾರ,
ವಧುವ ಕೇಳುವ ಪಿಲ್ಯಾನು ಹೂಡ್ಯಾರ...!!!

ಮಲ್ಲಿಗೆಯು ನುಡಿದಾಳ,
" ಇಲ್ಲ ನಾ ಬರಲೊಲ್ಲೆ, ಇರುವೆನಿಲ್ಲೆ ಭುವಿಯೊಳು
ಈ ಕವಿಯ ಕಾವ್ಯದೊಳು,
ಈ ಕವಿಯ ಪ್ರೇಮದೊಳು,
ಯಾರೇನಂದರು ಈ ಕವಿಯೆ ಭುವಿ ಅಳಿಯ
ಈ ಮಲ್ಲಿಗೆಯ ಪ್ರೇಮದೊಡೆಯ!!"

ಈ ಕವಿಯು ನುಡಿದಾನ,
" ಹೇಳೆ ಓ ಮಲ್ಲಿಗೆವ್ವೆ, ನಾ ಏನ ಮಾಡಲಿ,
ಸೂರ್ಯ ಚಂದಿರರ ಮಣಿಸಿ ನಿನ್ನ್ಹೆಗೆ ವರಿಸಲಿ,
ಜಗದ ಕಣ್ಗಳು ಅವ್ರು, ಜೀವ ಶಕ್ತಿಯು ಅವರು
ಎರಡು ದಿನದ ಬದುಕ ಕರಣಿಕನು ನಾನು..!"

ಮಲ್ಲಿಗೆಯು ನುಡಿದಾಳ,
" ಪ್ರೀತಿಗೆ ಸೋಲದವರ್ ಯಾರೌರೊ ಸರದಾರ
ಊಟಕ್ಕೆ ಕರೆದಾಳ ನನ್ನವ್ವ ನೀ ಬಾರಾ
ಪ್ರೀತಿಯ ಮ್ಯಾಲ್ ತಾನೆ ನನ್ನವ್ವ ನಿಂತಾಳ
ಕಾಯ್ತಿರ್ತಿನ್ ಬಾರೋ, ಬಾ ಬಾರೋ ಭುವಿ ಅಳಿಯ..!"

Friday, August 13, 2010

ಸಂಗಾತಿಯಿಲ್ಲದ ಮೊದಲ ಮಳೆಗಾಲ..!

ನನ್ನೂರಲ್ಲೂ ಮಳೆ, ನಿನ್ನೂರಲ್ಲೂ ಮಳೆ
ಒದ್ದೆಯಾಗಲೇಬೇಕು ನೆನಪುಗಳು..
ನನ್ನೂರಲ್ಲೂ ಚಳಿ, ನಿನ್ನೂರಲ್ಲೂ ಚಳಿ
ಕಾಡಲೇಬೇಕು ಮುತ್ತುಗಳು..

ನನ್ನೂರ ಹೆಣ್ಣು, ನಿನ್ನೂರ ಮದುವೆ
ಆಗಲೇಬೇಕು ಭೇಟಿ..
ನಿನ್ನೂರ ಕಾಲುವೆ, ನನ್ನೂರ ಸೇತುವೆ
ಸಾಗಲೇಬೇಕು ದಾಟಿ..

Thursday, January 28, 2010

ಮಂಕಾಗಿದೆ ಆ ದಾರಿ..

ವರುಷಗಳ ಕಾಲ,
ನಮ್ಮಿಬ್ಬರನು ತನ್ನೆದೆ ಮೇಲೆ ಹೊತ್ತು ನಡೆಸಿದ ದಾರಿ
ಇಂದು ನಾನೊಬ್ಬನೇ ಹೋದಾಗ ದೂರ ತಳ್ಳಿದೆ..!
ಆ ಬಿರು ಬಿಸಿಲಿನಲ್ಲೂ, ಆ ದಾರಿ ಒದ್ದೆಯಾಗಿರುವುದ ಕಂಡೆ!
ಆಚೆ ತುದಿಯಲ್ಲಿ ನೀ ನಿಂತಿದ್ದಿರಬೇಕು!

Sunday, January 10, 2010

ಅಲ್ಲಿ ಅವರೇ ಇರಲಿಲ್ಲ...!

ಆಕೆ ಶವವಾಗಿ ಮಲಗಿದ್ದಳು
ರಾತ್ರಿ ಕಳೆಯುವುದನ್ನೇ ಕಾಯುತ್ತ
ದಿನೇ ದಿನೇ ತನ್ನ ಬೆಲೆ ಕಡಿಮೆಯಾಗುತ್ತಿರುವುದರ ಬಗ್ಗೆ ಚಿಂತಿಸುತ್ತಾ..

ಆತ ಭೋರ್ಗರೆಯುತ್ತಿದ್ದ
ರಾತ್ರಿ ಕಳೆದು ಹೋದೀತೆಂಬ ಆತುರದಲ್ಲಿ
ತನ್ನ ಹಣದ ಸಂಪೂರ್ಣ ಉಪಯೋಗ ಪಡೆಯುವ ಭರದಲ್ಲಿ...

ಅಲ್ಲಿ ರತಿ ಮನ್ಮಥರೆ ಇರಲಿಲ್ಲ..!