Saturday, November 28, 2009

ಒಂದು ಸಣ್ಣ ಕಥೆ!

ಆಗ ತಾನೆ ಚಿಗುರೊಡೆಯುತ್ತಿತ್ತು. ಆತ ನೋಡಿದ. ಅದು ನಕ್ಕು ಹೂವಾಯಿತು. ಆತ ಪ್ರೀತಿಸಿದ. ಅದು ನಕ್ಕು ಕಾಯಾಯಿತು. ಆತ ಕನಸು ಕಟ್ಟಿದ. ಅದು ನಗುತ್ತಲೇ ಹಣ್ಣಾಯಿತು. ಆತ ಕನಸು ಕಟ್ಟುತ್ತಲೇ ಇದ್ದ. ಅದು ಕೂಗಿ ಹೇಳಿತು "ನನ್ನ ಸಮಯ ಬಂದಿದೆ, ಬಿಡಿಸಿ ತಿಂದುಬಿಡು" ಎಂದು. ಆತ ಹೇಳಿದ "ಇನ್ನೇನು ಕನಸು ಹತ್ತಿರದಲ್ಲೇ ಇದೆ, ಬಂದು ಬಿಡಲಿ, ಇಬ್ಬರನ್ನು ಒಟ್ಟಿಗೆ ಪಡೆಯುತ್ತೇನೆ". ಅದು ಭಯದಲ್ಲಿ ಕಂಪಿಸುತ್ತ ಕೂಗಿತು "ನನ್ನನ್ನು ತಿಂದುಬಿಡು" . ಆತ ತೂಕಡಿಸುತ್ತಾ ಹೇಳಿದ "ಸ್ವಲ್ಪ ತಾಳು, ಇನ್ನೇನು ಕನಸು ಬಂದೆ ಬಿಡುವುದು". ಅದು ಮೌನವಾಯಿತು. ಆತ ತೂಕಡಿಕೆಯಿಂದ ಎದ್ದ. ಅದು ಅಲ್ಲಿರಲಿಲ್ಲ. ಕನಸು ಇನ್ನೂ ಬಂದಿರಲೇ ಇಲ್ಲ. ಆತ ಅಲ್ಲೇ ಕುಳಿತಿದ್ದಾನೆ. ಕೇಳಿದರೆ, "ಹುಡುಕುತ್ತಿದ್ದೇನೆ!" ಎನ್ನುತ್ತಾನೆ.

ಬಿಕ್ಕಳಿಕೆ.. ತೇವ..!

ನೀ ಬಿಕ್ಕಳಿಸಿದಾಗ ಆದ
ಹೆಗಲ ಮೇಲಿನ ತೇವ,
ಆವಿಯಾಗಿ ಹವೆಯಾಗುತಿದೆ
ಆಕೆಯ ಉನ್ಮಾದದ ಬಿಸಿಯುಸಿರಲಿ!

Thursday, November 19, 2009

ಏಕಾಂತದಲ್ಲಿ...

ನೇಸರವ ಬಣ್ಣಿಸಲು ಉಪಮೆಯ ಹುಡುಕುತ್ತಿದ್ದೆ;
ನಿನ್ನ ನೆನಪಾಯಿತು!

ರಾಗ ಬದಲಾದಾಗ!

ನನ್ನಲ್ಲಿ ಮೂಡಿ,
ನಿನ್ನ ಕೈ ಬರಹದಲ್ಲಿ ಕವಿತೆಯಾದ ಪದಗಳ ಓದುತ್ತಿದ್ದೆ!
ಪದಗಳೇನೋ ಅವೇ; ಆದರೀಗ ಪ್ರೆಮಗೀತೆಯಲ್ಲ;
ರಾಗ ಬದಲಾಗಿದೆ; ಅದೀಗ ವಿರಹಗೀತೆ..!

Monday, November 9, 2009

ನಿನ್ನ ಒಂದೇ ಒಂದು ತಪ್ಪು!

ನಾ ನಿರ್ಧರಿಸಿದೆ, ನೀ ಹೂ ಗುಟ್ಟಿದೆ
ನಿಮ್ಮಪ್ಪ ನಿರ್ಧರಿಸಿದ, ನೀ ಹೂ ಗುಟ್ಟಿದೆ
ನೀ ಬರೀ ಹೂ ಗುಟ್ಟಿದೆ,
ನೀನೆಂದು ನಿರ್ಧರಿಸಲೇ ಇಲ್ಲ...!
ಅದೇ ನೀ ಮಾಡಿದ ತಪ್ಪು !!

Thursday, October 29, 2009

ಕಪ್ಪು ಕನ್ನಡಕ ನೀ ಕೊಡಿಸಿದ್ದೇಕೆ..?

ಬಿಸಿಲು ತಡೆಯಲು ನೀನಂದು ಕೊಡಿಸಿದ ಕಪ್ಪು ಕನ್ನಡಕ
ಕಾಯುತಿದೆ ಇಂದು ನನ್ನೊಳಗಿನ ದೇವದಾಸ ಯಾರಿಗೂ ಕಾಣದಂತೆ..!
ನೀ ತುಂಬಾ ದೂರದೃಷ್ಟಿ !!!

Monday, October 26, 2009

ಮರಳಿ ಬಾರೆ ಗೆಳತಿ...

ನೀ ಬೊಂಬೆಯಲ್ಲ ಗೆಳತಿ
ತ್ಯಾಗಿಯಾಗದಿರು, ದೂರ ಹೋಗದಿರು...

ಹೃದಯ ಕಡೆದು, ರಕ್ತ ಬಸಿದು
ಮೊಗೆದು ಕೊಡುವೆ ಬಾರೆ
ಅಳೆಯಲಾರದಷ್ಟು ಒಲವ...

ಮರಳಿ ಬಾರೆ ಗೆಳತಿ, ನೀ ಬೊಂಬೆಯಲ್ಲ
ತ್ಯಾಗಿಯಾಗದಿರು, ದೂರ ಹೋಗದಿರು...!

ನಕ್ಕುಬಿಡಿ..!

ಆತನ ಶವದ ಮೇಲೆ
ಆಕೆಯ ಶವದ ಮದುವೆ
ನಕ್ಕುಬಿಡಿ, ಇದು ಪ್ರೇಮ ಕಥೆ...!

Tuesday, March 10, 2009

ನಿನ್ನಂತವಳನ್ನೆ ನಂಗೆ ಕಟ್ತೀಯೇನೆ, ಅವ್ವ!!!

ಏನ್ ಕೆಲಸ ಮಾಡ್ತಿದೀಯ ಮಗ..? ಅಂತ ಕೇಳ್ಳಿಲ್ಲ ನನ್ನವ್ವ,
ನಿನಗನ್ಸಿದ್ ಏನಾರ ಮಾಡ್ಲ ಮಗ,
ಯಾರಿಗು ತೊಂದರೆ ಕೊಡಬೇಡ ಅಂದ್ಲು..!

ಏಷ್ಟು ದುಡಿತೀಯೊ ಮಗ..? ಅಂತ ಕೇಳ್ಳಿಲ್ಲ ನನ್ನವ್ವ
ಸಂಜೆ ಮನಿಗ್ ಬಂದಾಗ ಕೈ ತುತ್ತು ಹಾಕಿ
ಸುಸ್ತಾಗಿರ್ತೀಯ ಉಂಡು ಮಂಕಳ್ಳ ಮಗ ಅಂದ್ಲು..!

ನಂಗೇನ್ ಮಾಡ್ದೆ ಮಗ..? ಅಂತ ಕೇಳ್ಳಿಲ್ಲ ನನ್ನವ್ವ
ತಾನು ಹೊಂಚಿದ್ ಒಂದುಂಡೆ ಬೆಣ್ಣೆ ಹಾಕಿ
ಉಂಡ್ಕಂಡು ಚೆನ್ನಾಗಿರ್ಲ ಮಗ, ಅಂದ್ಲು..!

ಕುಂತ್ಕಂಡು ಎಳ್ಡ್ ಮಾತಾಡು, ಅಂತ ಕೇಳ್ಳಿಲ್ಲ ನನ್ನವ್ವ
ಸೋತು ಬಂದಾಗ್ಲೆಲ್ಲ ಜೋಗುಳ ಹಾಡಿ
ಯಾವಾಗ್ಲು ನಗ್ತಾ ಇರ್ಲ ಮಗ, ಅಂದ್ಲು..!

ನಂಗೂ ವಯಸ್ಸಾತು, ಇನ್ ಆಗಕ್ಕಿಲ್ಲ ಕಣ್ ಮಗ !
ಅಂತ ಅನ್ಲಿಲ್ಲ ನನ್ನವ್ವ,
ಒಂದು ಮದುವೆ ಆಗ್ಲ ಮಗ, ನಿಂಗೂ ಆಸರೆ ಆಗುತ್ತೆ ಅಂದ್ಲು..!

ನಿನ್ನ ಕಳ್ಕಳಕೆ ನನ್ನ ಕೈಯಲ್ಲಿ ಆಗಕ್ಕಿಲ್ಲ
ನಿನ್ನಂತವಳನ್ನೆ ನಂಗೆ ಕಟ್ತೀಯೇನೆ, ಅವ್ವ? ಅಂದೆ
ಹುಂಕಣ್ ಸುಮ್ಕಿರ್ಲ ಮಗ, ಅಂತವಳನೆ ಕಟ್ತೀನಿ
ಜೊತಿಗೆ ನಾನು ನಿನ್ನ ಮಗಳಾಗಿ ಹುಟ್ಟಿ, ನಿನ್ನ ಹಿಂಗೆ ನೋಡ್ಕಂತೀನಿ, ಅಂದ್ಲು ನನ್ನವ್ವ!!!

Wednesday, January 14, 2009

ಬಾಳ ಬೆಳಗೈತಿ ನನ್ನ ಅಜ್ಜಿ ಕಥೆ..!

ಬೆಳದಿಂಗಳ ರಾತ್ರಿಯಾಗ
ನನ್ನ ಅಜ್ಜಿ, ನನ್ನ ತೊಡೆ ಮ್ಯಾಲೆ ಮಲಗಿಷ್ಕೆಂಡು
ಕೃಷ್ಣನ ಬಾಯಾಗ ಪ್ರಪಂಚಾನೆ ಕಾಣಿಸ್ತಂತೆ ಅಂತ ಕಥೆ ಹೇಳತಾ ಇದ್ದರೆ
ನನ್ನ ಅಜ್ಜಿ ಬೊಚ್ಚು ಬಾಯಿ ನೋಡಿ
" ಇದ್ಯಾಕವ್ವ ನಿನ್ನ ಬಾಯಾಗ ಒಂದು ಹಲ್ಲು ಇಲ್ವಲ್ಲ..?" ಅಂತ ಪ್ರಶ್ನೆ ಕೇಳಿದ್ದೆ.
ನನ್ನ ಅಜ್ಜಿ
" ಮುದ್ದೆ ಉಣ್ಣಬೇಕಾದರೆ, ಸಾರಲ್ಲಿ ಕಲ್ ಸಿಕ್ಕಿ
ನಿಮ್ಮಜ್ಜ ಸಿಟ್ಟಲ್ಲಿ ತಲೆ ಮ್ಯಾಕೆ ಗುದ್ದಿದ್ದ ಕಣ್ ಮಗ,
ಹಲ್ಲೆಲ್ಲ ಉದುರಿ ಹೋದು" ಅಂದಿದ್ಲು!
ನಾನು ನನ್ನ ಹಲ್ಲನೆಲ್ಲ ತೋರಿಸಿ ಕಿಸಿ ಕಿಸಿ ನಕ್ಕಿದ್ದೆ!!!

ಬೆಳಗ್ಗೆ ನನ್ನವ್ವ ನನ್ನ ಬಚ್ಚಲಲ್ಲಿ ನಿಲ್ಲಿಸಿಕೆಂಡು ನೀರು ಉಯ್ಯಬೇಕಾದರೆ
ನನ್ನವ್ವ ಕತ್ತಲ್ಲಿ ಆಗಿದ್ದ ಕಲೆ ನೋಡಿ,
" ಇದ್ಯಾಕವ್ವ? ಏನಾತು..? ಅಂತ ಕೇಳೋಣಂದ್ಕಂಡೆ.
ರಾತ್ರಿ ಮುದ್ದೆ ಉಣ್ಣಬೇಕಾದರೆ, ಸಾರಲ್ಲಿ ಕಲ್ ಸಿಕ್ಕಿ
ನಮ್ಮಪ್ಪ ಸಿಟ್ಟಲ್ಲಿ ಕಚ್ಚಿರಬೇಕಂದ್ಕಂಡು ಸುಮ್ನಾದೆ!
ನನ್ನಜ್ಜಿ ಮಗ್ಗಲು ನನ್ನ ಚಿಂತಗಚ್ಚಿತ್ತು!!!

ಸಾಯೋತಂಕ ಸಾವಿರ ಕಥೆ
ಬಗ್ಗಲ್ಲಲ್ಲಿ ತನ್ನ ಕಾಲದ ಕಾಸಿನ ಗಂಟು,
ಇವು ನನ್ನಜ್ಜಿ ನನಗೇಂತ ಬಿಟ್ಟು ಹೋಗಿದ್ದು!

ಕಾಲದ ಜೋಳಿಗೆಯೊಳಗೆ, ಎಲ್ಲ ಮರೆಯಾದರು
ನನ್ನಜ್ಜಿ, ನನ್ನವ್ವ, ನನ್ನಪ್ಪ... ನಾ ಒಂಟಿಯಾದೆ!
ತಿನ್ನೋಕೊಂದಿಷ್ಟು ಅಕ್ಕಿ ತರೋಣಾಂತ
ನನ್ನಜ್ಜಿ ಕಾಸು ತಗಂಡು ಅಂಗಡಿಗೆ ಹೋದೆ.
ನನ್ನಜ್ಜಿ ಕಾಸಿಗೆ ಬೆಲೆ ಇಲ್ಲ
ನನ್ನ ಹಸಿವು ಹಿಂಗಾಂಗಿಲ್ಲ!!!

ಅಜ್ಜಿ ಕಥೆ ಮನಸಾಗ್ ಬಂತು
ಕಾಸಿನ ಗಂಟು ತಾಳ ಆತು
ಹಸಿವಿನ ರಾಗದಲ್ಲಿ ಪದ ಕಟ್ಟಿ
ಅಜ್ಜಿ ಕಥೆ ಹಾಡ್ಕೋತ ಹೊಂಟಿ..!

ಹೊಟ್ಟೆ ತುಂಬೈತಿ
ಬಾಳ ಬೆಳಗೈತಿ ನನ್ನ ಅಜ್ಜಿ ಕಥೆ!!!!