Thursday, October 7, 2010

ಬಿಳಿ ಹುಡುಗಿ ಮತ್ತು ಭೂಮಿ ಅಳಿಯ..!!

ಬೆಳ್ಳಾನೆ ಹೆಣ್ಣಿವಳು, ಚೆಂದಾದ ಕಣ್ಣವಳು
ಕಣ್ಣಲ್ಲೇ ಬೆಳಕೈತಿ, ಬೆಳದಿಂಗಳು ಐತಿ
ಏನೆಂದು ಬಣ್ಣಿಸಲಿ ನೇಸರವೆ ನಾಚೈತಿ
ಭೂಮಿಯ ಮಗಳಿವಳು ಮಲ್ಲಿಗೆವ್ವ ..!
ಬೆಳ್ಳಾನೆ ಹೆಣ್ಣಿವಳು, ಚೆಂದಾದ ಕಣ್ಣವಳು..!!!

ಚಂದಿರನ ಮನದಾಗೆ ಮಲ್ಲಿಗೆವ್ವ ಕುಂತಾಳ,
ಚಂದಿರನ ಮಡದಿ ಕಾಂತವ್ವೆ ಮುನಿದಾಳ,
ಸೂರ್ಯನಾ ಮನೆಯಾಗೆ ಪಂಚಾಯಿತಿ ಸೇರ್
ಸ್ಯಾಳ...!
ಅತ್ತಿಗೆಯ ಪರವಾಗಿ ಸೂರ್ಯಾನು ನಿಂತಾನ,
ಚಂದಿರನ ಒಲೈಸೆ ಪಿತೂರಿ ನಡೆಸ್ಯಾನ,
ಸೂರ್ಯಂಗು ಮಲ್ಲಿಗೆ ಮ್ಯಾಗ್ ಮನಸಾಗೈತಿ..!

ಸೂರ್ಯ ಚಂದಿರೀರ್ವರು ಧರೆಗಿಳಿದು ಬಂದಾರ,
ಭುವಿಯಕ್ಕನ ಮಡಿಲಿಗೆ ಬಾಗಿನವ ತಂದಾರ,
ವಧುವ ಕೇಳುವ ಪಿಲ್ಯಾನು ಹೂಡ್ಯಾರ...!!!

ಮಲ್ಲಿಗೆಯು ನುಡಿದಾಳ,
" ಇಲ್ಲ ನಾ ಬರಲೊಲ್ಲೆ, ಇರುವೆನಿಲ್ಲೆ ಭುವಿಯೊಳು
ಈ ಕವಿಯ ಕಾವ್ಯದೊಳು,
ಈ ಕವಿಯ ಪ್ರೇಮದೊಳು,
ಯಾರೇನಂದರು ಈ ಕವಿಯೆ ಭುವಿ ಅಳಿಯ
ಈ ಮಲ್ಲಿಗೆಯ ಪ್ರೇಮದೊಡೆಯ!!"

ಈ ಕವಿಯು ನುಡಿದಾನ,
" ಹೇಳೆ ಓ ಮಲ್ಲಿಗೆವ್ವೆ, ನಾ ಏನ ಮಾಡಲಿ,
ಸೂರ್ಯ ಚಂದಿರರ ಮಣಿಸಿ ನಿನ್ನ್ಹೆಗೆ ವರಿಸಲಿ,
ಜಗದ ಕಣ್ಗಳು ಅವ್ರು, ಜೀವ ಶಕ್ತಿಯು ಅವರು
ಎರಡು ದಿನದ ಬದುಕ ಕರಣಿಕನು ನಾನು..!"

ಮಲ್ಲಿಗೆಯು ನುಡಿದಾಳ,
" ಪ್ರೀತಿಗೆ ಸೋಲದವರ್ ಯಾರೌರೊ ಸರದಾರ
ಊಟಕ್ಕೆ ಕರೆದಾಳ ನನ್ನವ್ವ ನೀ ಬಾರಾ
ಪ್ರೀತಿಯ ಮ್ಯಾಲ್ ತಾನೆ ನನ್ನವ್ವ ನಿಂತಾಳ
ಕಾಯ್ತಿರ್ತಿನ್ ಬಾರೋ, ಬಾ ಬಾರೋ ಭುವಿ ಅಳಿಯ..!"