Saturday, November 28, 2009

ಒಂದು ಸಣ್ಣ ಕಥೆ!

ಆಗ ತಾನೆ ಚಿಗುರೊಡೆಯುತ್ತಿತ್ತು. ಆತ ನೋಡಿದ. ಅದು ನಕ್ಕು ಹೂವಾಯಿತು. ಆತ ಪ್ರೀತಿಸಿದ. ಅದು ನಕ್ಕು ಕಾಯಾಯಿತು. ಆತ ಕನಸು ಕಟ್ಟಿದ. ಅದು ನಗುತ್ತಲೇ ಹಣ್ಣಾಯಿತು. ಆತ ಕನಸು ಕಟ್ಟುತ್ತಲೇ ಇದ್ದ. ಅದು ಕೂಗಿ ಹೇಳಿತು "ನನ್ನ ಸಮಯ ಬಂದಿದೆ, ಬಿಡಿಸಿ ತಿಂದುಬಿಡು" ಎಂದು. ಆತ ಹೇಳಿದ "ಇನ್ನೇನು ಕನಸು ಹತ್ತಿರದಲ್ಲೇ ಇದೆ, ಬಂದು ಬಿಡಲಿ, ಇಬ್ಬರನ್ನು ಒಟ್ಟಿಗೆ ಪಡೆಯುತ್ತೇನೆ". ಅದು ಭಯದಲ್ಲಿ ಕಂಪಿಸುತ್ತ ಕೂಗಿತು "ನನ್ನನ್ನು ತಿಂದುಬಿಡು" . ಆತ ತೂಕಡಿಸುತ್ತಾ ಹೇಳಿದ "ಸ್ವಲ್ಪ ತಾಳು, ಇನ್ನೇನು ಕನಸು ಬಂದೆ ಬಿಡುವುದು". ಅದು ಮೌನವಾಯಿತು. ಆತ ತೂಕಡಿಕೆಯಿಂದ ಎದ್ದ. ಅದು ಅಲ್ಲಿರಲಿಲ್ಲ. ಕನಸು ಇನ್ನೂ ಬಂದಿರಲೇ ಇಲ್ಲ. ಆತ ಅಲ್ಲೇ ಕುಳಿತಿದ್ದಾನೆ. ಕೇಳಿದರೆ, "ಹುಡುಕುತ್ತಿದ್ದೇನೆ!" ಎನ್ನುತ್ತಾನೆ.

ಬಿಕ್ಕಳಿಕೆ.. ತೇವ..!

ನೀ ಬಿಕ್ಕಳಿಸಿದಾಗ ಆದ
ಹೆಗಲ ಮೇಲಿನ ತೇವ,
ಆವಿಯಾಗಿ ಹವೆಯಾಗುತಿದೆ
ಆಕೆಯ ಉನ್ಮಾದದ ಬಿಸಿಯುಸಿರಲಿ!

Thursday, November 19, 2009

ಏಕಾಂತದಲ್ಲಿ...

ನೇಸರವ ಬಣ್ಣಿಸಲು ಉಪಮೆಯ ಹುಡುಕುತ್ತಿದ್ದೆ;
ನಿನ್ನ ನೆನಪಾಯಿತು!

ರಾಗ ಬದಲಾದಾಗ!

ನನ್ನಲ್ಲಿ ಮೂಡಿ,
ನಿನ್ನ ಕೈ ಬರಹದಲ್ಲಿ ಕವಿತೆಯಾದ ಪದಗಳ ಓದುತ್ತಿದ್ದೆ!
ಪದಗಳೇನೋ ಅವೇ; ಆದರೀಗ ಪ್ರೆಮಗೀತೆಯಲ್ಲ;
ರಾಗ ಬದಲಾಗಿದೆ; ಅದೀಗ ವಿರಹಗೀತೆ..!

Monday, November 9, 2009

ನಿನ್ನ ಒಂದೇ ಒಂದು ತಪ್ಪು!

ನಾ ನಿರ್ಧರಿಸಿದೆ, ನೀ ಹೂ ಗುಟ್ಟಿದೆ
ನಿಮ್ಮಪ್ಪ ನಿರ್ಧರಿಸಿದ, ನೀ ಹೂ ಗುಟ್ಟಿದೆ
ನೀ ಬರೀ ಹೂ ಗುಟ್ಟಿದೆ,
ನೀನೆಂದು ನಿರ್ಧರಿಸಲೇ ಇಲ್ಲ...!
ಅದೇ ನೀ ಮಾಡಿದ ತಪ್ಪು !!