Tuesday, October 21, 2008

ಜೀವದ ಅಂತ್ಯಕೆ ಜೀವ ಕಾಯುತಿರಲ್, ನಗುತಿಹುದು ವಿಧಿಯು!!!


















ಯಾವುದೋ ಕಾಲದಲಿ ನಶಿಸಿ
ನೀನೀಗ ಸಂಶೋಧಿಸಿ ತೆಗೆದ ಪಳಯುಳಿಕೆಯಲ್ಲವಿದು ಮಾನವ....!

ನನ್ನ ಆಜ್ಞೆಯ ಮೀರಿ
ನಿಯಮಗಳ ಬದಿಗೆಸೆದು
ನೀನಿತ್ತ ಪ್ರಶ್ನೆಗಳಿಗೆ
ನನ್ನ ಉತ್ತರವಿದು...!

ನಿನ್ನ ಅಂತ್ಯವ
ಕಾದು ಕುಳಿತಿಹನು ನೋಡು ಜವರಾಯ!!!

Wednesday, October 15, 2008

ಮತ್ತೆ ತೆರೆ ಏಳಲು...?

ತೆರೆ ಮೇಲೇರಿ
ಮೌನ ಒಡೆದು
ಹಾರ್ಮೋನಿಯಂ ಸ್ವರ ಹೊರಡಲು
ಸೂತ್ರಧಾರಿಯ ಕುಣಿತದ ಪರಿ
ರಂಗದಿ ರಂಗೇರಿತು!!!

ಸೂತ್ರಧಾರಿಯಾತ, ರಂಗದಾಟ ನಡೆಸುವಾತ
ಕುಣಿಸುತ ನಡೆದ ಪಾತ್ರಗಳ
ಮನದಣಿಯೆ......!
ಬಣ್ಣದ ಕಥೆಯ ತೋರುತ ನಡೆ
ಮನತಣಿಯೆ......!

ರಂಗದಾಟದಲಿ, ರಂಗಿನೋಟದಲಿ
ಬಣ್ಣಗಟ್ಟಿದವು ಪಾತ್ರಗಳು
ಬದುಕ ಅಳೆದವು
ಭವವ ಜರಿದವು
ಸೂರ್ಯ ಚಂದಿರರ ಅಸ್ಥಿತ್ವ ಒಡೆದವು
ಸೂತ್ರದಾರನ ಕೊಂಡಿ ಕಳಚಿ
ಕುಣಿಯಲತ್ತಿದವು ಮನಬಂದಂತೆ....!

ಮುನಿದ ಮಾರ ಆ ಸೂತ್ರಧಾರ
ಜೀಕಿ ಎಳೆದ ರಂಗದಾರ
ನಡುಗಿತಾಗ ರಂಗಸಜ್ಜಿಕೆ
ಹಾರ್ಮೋನಿಯಂನ ಆರ್ತನಾದಕೆ
ಹೆಪ್ಪುಗಟ್ಟಿದ ಪಾತ್ರಗಳು
ಬಿದ್ದೆದ್ದವು ರಂಗದೊಳು...
ಮೌನ ಚೆಲ್ಲಿತು
ತೆರೆ ಬಿದ್ದಿತು!!!

ಮತ್ತೆ ತೆರೆ ಏಳಲು...
ಕಂಡದ್ದು,
ಪಾತ್ರಗಳ ಅವಶೇಷಗಳು!
ಮುರಿದ ಹಾರ್ಮೋನಿಯಂ !
ಚಿಂದಿಯಾದ ದಾರಗಳು !
ಮೌನ ಮಡುಗಟ್ಟಿ, ಶಿಲೆಯಾಗಿ ನಿಂತಿದ್ದ ಸೂತ್ರಧಾರ ................!

Tuesday, October 14, 2008

ನಿನಾದ ...!

ಎದೆಯ ಕರಗಂಟೆ ಬಡಿದು
ಮನದ ತಂತಿಯೊಂದು ಮಿಡಿದು
ಪುಟಿದ ಆ ಸ್ವರಗಳ ಸಹಿಯೇ
ಕನಸಾಗಿ ಕಾಡಿಹದಲ್ಲ
ನನ್ನೆದೆಯ ಮಧುರ ಮಿಳಿತ ನಿನಾದ....!!!

Saturday, October 4, 2008

ಬದುಕಿನ ಅಂತ್ಯದಲ್ಲಿ......!!!

ಸಾಯುವ ಮುನ್ನ ಎನ್ನ ಕನಸುಗಳೇ ಕೇಳಿರಿ
ಕಾಯುತಿರಿ ಎನ್ನ ಮತ್ತೆ ಬರುವೆ ನಿಮ್ಮನಪ್ಪಲು...!
ನೂರ್ ದೇಹ ಬಿಟ್ ನೂರ್ ದೇಹ ಸೇರಿದರು
ನಿಮ್ಮನ್ ಅಪ್ಪಿಯೇ ಅಪ್ಪುವೆನ್
ಕಾಯುತಿರಿ ಎನ್ನ ಮತ್ತೆ ಬರುವೆ ನಿಮ್ಮನಪ್ಪಲು...!

ಸಾಯುವ ಮುನ್ನ ಕಂಡ ಕನಸುಗಳ ಕೈ ಚೆಲ್ಲುತಿಹೆನು
ರಕ್ಷಿಸು ಪ್ರಕೃತಿಯೆ
ಮತ್ತೆ ಬರುವೆನು ಅವ ಪಡೆಯಲು
ನೀ ಮರುಜನ್ಮದ ಅನುಮತಿಯಿತ್ತರೆ!!!

ನೀ ಶಾಂತವಗುವೆ ಎಂದು....?

ಅದೆಷ್ಟು ಸತ್ಯಗಳನ್ನ ಅಡಗಿಸಿಕೊಂಡಿರುವೆ ಕಡಲೆ
ಹಗಲೆನ್ನದೆ ಇರುಳೆನ್ನದೆ ಭೋರ್ಗರೆವೆ
ಅದೇನು ಖುಷಿಯ ನರ್ತನವೋ
ದುಃಖದ ಆರ್ಭಟವೋ
ಅದೇನು ನಿನ್ನ ಗುರಿಯೋ
ಅದೇನು ನಿನ್ನ ಕನಸೋ
ಅದ್ಯಾವ ಅನಿವಾರ್ಯತೆಯೋ
ಎಡೆಬಿಡದೆ ದುಡಿಯುತಿರುವೆ......!
ನಿನ್ನಾಸೆ ತೀರುವುದೆಂದು, ನೀ ಶಾಂತವಗುವೆ ಎಂದು ....?

Friday, October 3, 2008

ಸ್ವಲ್ಪ ಪೋಲಿ!!!

ಹೊಳೆಯೊಳು ಗೋಪಿಕೆಯರು ಆಡುತ್ತಿದ್ದರೆ
ದಡದಲ್ಲಿದ್ದ ಮರವೊಂದು ಸ್ಖಲಿಸಿತಂತೆ
ರೆಂಬೆಯ ಮರೆಯಲ್ಲಿದ್ದ
ಗೊಲ್ಲನ ಕೈಯಲ್ಲಿ ಕೊಳಲಿರಲಿಲ್ಲವಂತೆ !!!