Wednesday, January 14, 2009

ಬಾಳ ಬೆಳಗೈತಿ ನನ್ನ ಅಜ್ಜಿ ಕಥೆ..!

ಬೆಳದಿಂಗಳ ರಾತ್ರಿಯಾಗ
ನನ್ನ ಅಜ್ಜಿ, ನನ್ನ ತೊಡೆ ಮ್ಯಾಲೆ ಮಲಗಿಷ್ಕೆಂಡು
ಕೃಷ್ಣನ ಬಾಯಾಗ ಪ್ರಪಂಚಾನೆ ಕಾಣಿಸ್ತಂತೆ ಅಂತ ಕಥೆ ಹೇಳತಾ ಇದ್ದರೆ
ನನ್ನ ಅಜ್ಜಿ ಬೊಚ್ಚು ಬಾಯಿ ನೋಡಿ
" ಇದ್ಯಾಕವ್ವ ನಿನ್ನ ಬಾಯಾಗ ಒಂದು ಹಲ್ಲು ಇಲ್ವಲ್ಲ..?" ಅಂತ ಪ್ರಶ್ನೆ ಕೇಳಿದ್ದೆ.
ನನ್ನ ಅಜ್ಜಿ
" ಮುದ್ದೆ ಉಣ್ಣಬೇಕಾದರೆ, ಸಾರಲ್ಲಿ ಕಲ್ ಸಿಕ್ಕಿ
ನಿಮ್ಮಜ್ಜ ಸಿಟ್ಟಲ್ಲಿ ತಲೆ ಮ್ಯಾಕೆ ಗುದ್ದಿದ್ದ ಕಣ್ ಮಗ,
ಹಲ್ಲೆಲ್ಲ ಉದುರಿ ಹೋದು" ಅಂದಿದ್ಲು!
ನಾನು ನನ್ನ ಹಲ್ಲನೆಲ್ಲ ತೋರಿಸಿ ಕಿಸಿ ಕಿಸಿ ನಕ್ಕಿದ್ದೆ!!!

ಬೆಳಗ್ಗೆ ನನ್ನವ್ವ ನನ್ನ ಬಚ್ಚಲಲ್ಲಿ ನಿಲ್ಲಿಸಿಕೆಂಡು ನೀರು ಉಯ್ಯಬೇಕಾದರೆ
ನನ್ನವ್ವ ಕತ್ತಲ್ಲಿ ಆಗಿದ್ದ ಕಲೆ ನೋಡಿ,
" ಇದ್ಯಾಕವ್ವ? ಏನಾತು..? ಅಂತ ಕೇಳೋಣಂದ್ಕಂಡೆ.
ರಾತ್ರಿ ಮುದ್ದೆ ಉಣ್ಣಬೇಕಾದರೆ, ಸಾರಲ್ಲಿ ಕಲ್ ಸಿಕ್ಕಿ
ನಮ್ಮಪ್ಪ ಸಿಟ್ಟಲ್ಲಿ ಕಚ್ಚಿರಬೇಕಂದ್ಕಂಡು ಸುಮ್ನಾದೆ!
ನನ್ನಜ್ಜಿ ಮಗ್ಗಲು ನನ್ನ ಚಿಂತಗಚ್ಚಿತ್ತು!!!

ಸಾಯೋತಂಕ ಸಾವಿರ ಕಥೆ
ಬಗ್ಗಲ್ಲಲ್ಲಿ ತನ್ನ ಕಾಲದ ಕಾಸಿನ ಗಂಟು,
ಇವು ನನ್ನಜ್ಜಿ ನನಗೇಂತ ಬಿಟ್ಟು ಹೋಗಿದ್ದು!

ಕಾಲದ ಜೋಳಿಗೆಯೊಳಗೆ, ಎಲ್ಲ ಮರೆಯಾದರು
ನನ್ನಜ್ಜಿ, ನನ್ನವ್ವ, ನನ್ನಪ್ಪ... ನಾ ಒಂಟಿಯಾದೆ!
ತಿನ್ನೋಕೊಂದಿಷ್ಟು ಅಕ್ಕಿ ತರೋಣಾಂತ
ನನ್ನಜ್ಜಿ ಕಾಸು ತಗಂಡು ಅಂಗಡಿಗೆ ಹೋದೆ.
ನನ್ನಜ್ಜಿ ಕಾಸಿಗೆ ಬೆಲೆ ಇಲ್ಲ
ನನ್ನ ಹಸಿವು ಹಿಂಗಾಂಗಿಲ್ಲ!!!

ಅಜ್ಜಿ ಕಥೆ ಮನಸಾಗ್ ಬಂತು
ಕಾಸಿನ ಗಂಟು ತಾಳ ಆತು
ಹಸಿವಿನ ರಾಗದಲ್ಲಿ ಪದ ಕಟ್ಟಿ
ಅಜ್ಜಿ ಕಥೆ ಹಾಡ್ಕೋತ ಹೊಂಟಿ..!

ಹೊಟ್ಟೆ ತುಂಬೈತಿ
ಬಾಳ ಬೆಳಗೈತಿ ನನ್ನ ಅಜ್ಜಿ ಕಥೆ!!!!

5 comments:

ಚರಣರಾಜ ಎಮ್ ಜಿ said...

"ಸಂಬಂಜಾನ್ನೋದು ದೊಡ್ದು ಕನಾ"....ನಾನು ರಂಗಾಯಣದಲ್ಲೊಮ್ಮೆ ನಿನ್ನ ಜೊತೆ ಅಲೆದಾಡುವಾಗ ನೆನಪಾಗಿ ನಿನ್ನ ಬಾಯಿಂದ ಉದುರಿದ ದೇವನೂರ ಮಹಾದೇವರ ಮುತ್ತುಗಳು....ನಾನು ಅವನ್ನು ಗಾಳಿಯಲ್ಲೆ ಆತುಕೊಂಡು ನನ್ನೊಳಗೆಲ್ಲೋ ಬಚ್ಚಿಟ್ಟು ಕೊಂಡೆ...ನಿನ್ನ ಈಚಿನ ಕವನವನ್ನೋದಿದಾಗ ಅದೇ ಮಾತುಗಳನ್ನು ಮತ್ತೆ ಮತ್ತೆ ಕೇಳಿಸಿ ಕೊಂಡಂತಾಗಿ ಖುಷಿಯಾಗಿದೆ. ಸಂಬಂಧವೊಂದನ್ನು ನಾವು ಸಂಬಾಳಿಸಿದರೆ ಅದು ವ್ಯಕ್ತಿಗಳನ್ನು ಮೀರಿ ದೊಡ್ದದಾಗುತ್ತೆ....ನಾವು ಅದರ ಮೂಲಕ ಅಸ್ತಿತ್ವಕ್ಕೆ ಬರುತ್ತೇವೆ....ಸಂಬಂದಗಳಿಲ್ಲದೆ ಬದುಕಿದರೆ (ಸಾಧ್ಯವಿದೆಯೇ?)..........
ಅಜ್ಜಿ ಮತ್ತು ಅಜ್ಜ ಎನ್ನುವ ಸಂಬಂಧಗಳಿಗೆ ಪರ್ಯಾಯವಾದ ಸಂಬಂಧಗಳಿಲ್ಲ... ಅದರಲ್ಲೊಂದನ್ನು ನೀನು ಸವಿದಿರುವ ಕ್ಷಣಗಳು ಕವಿತೆಯಾಗಿ ಮೂಡಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯ....ನಿನ್ನ ಅಜ್ಜಿ ನಿನಗೇಂತ ಬಿಟ್ಟು ಹೋಗಿದ್ದು ಏನನ್ನು...ನೀನು ಹೇಳುವಂತೆ ಬರೀ ಅವೆರೆಡೇನ? ಮತ್ತೊಮ್ಮೆ ಕೇಳಿಕೋ... ಹೊಳೆದೀತು!
ಕಲಾವಿದರಿಗೆ ಸಹಜವಾದ ನೋವು, ಅವಸಾನ, ದುರಂತಗಳೇ ನಿನ್ನ ಹಿಂದಿನ ಕವಿತೆಗಳಲ್ಲಿ ತುಂಬಿಕೊಂಡು ನನಗೆ ಚಿಂತೆಯಾಗಿತ್ತು...ಇವನು ಮುಂದೆ ಏನಗ್ತಾನೋ?....ಏನಾದ್ರು ಹಾಗೋದ್ರೆ ಹೇಗೆ?.....ನಿನ್ನ ಅಜ್ಜಿ ನಿನ್ನಲ್ಲೊಂದು ಜೀವನಪ್ರೀತಿಯ ಕವನ ಮೂಡಿಸಿದ್ದಾಳೆ.....
ನಿನ್ನೊಳಗಿನ ಕವಿ, ಕಲಾವಿದನಿಗೆ ನನ್ನೊಳಗೆ ಪ್ರೀತಿ ಬೆರೆತ ಗೌರವವಿದೆ....ಅವನಿಗೆ ಬೆನ್ನು ತಟ್ಟುವುದು, ಚಪ್ಪಾಳೆ ಹೊಡೆಯುವುದು ನನಗೆ ತೀರ ಸಹಜವಷ್ಟೇ....
ಧನೂ.......ನಿನ್ನ ಕನಸಿನ ಕಣಜವೆಂಬ ಬತ್ತಳಿಕೆ ಖಾಲಿಯಾಗಿ ಮತ್ತೆ ತುಂಬುತ್ತಿರಲಿ.....ನೀನು ಹೀಗೆಯೇ ಕವನಗಳ ಬಾಣಗಳನ್ನು ನಮ್ಮತ್ತ ಹೂಡುತ್ತಿರು........

ಮುಗಿಸುವ ಮುನ್ನ ಮತ್ತೊಮ್ಮೆ ಹೇಳಬೇಕೆನಿಸುತ್ತಿದೆ....ತಡೆಹಿಡಿಯಲಾಗುತ್ತಿಲ್ಲ...."ಸಂಬಂಜಾನ್ನೋದು ದೊಡ್ದು ಕನಾ"....

ಯಾವತ್ತೂ ನಿನ್ನವ....
ಚರಣರಾಜ ಮತ್ತೀಹಳ್ಳಿ

Anonymous said...
This comment has been removed by a blog administrator.
Anonymous said...
This comment has been removed by a blog administrator.
RG Karthik said...

Adbhuta Kalpane ...

RG Karthik said...

Adbhuta Kalpane ...